ಈಸ್ಟ್ ಇಂಡೀಸ್-
ಆಗ್ನೇಯ ಏಷ್ಯದ ಖಂಡಪ್ರದೇಶಕ್ಕೂ ಉತ್ತರ ಆಸ್ಟ್ರೇಲಿಯಕ್ಕೂ ನಡುವೆ ಭೂಮಧ್ಯೆರೇಖೆಯ ಆಚೀಚೆ ವಿಸ್ತಾರ ಪ್ರದೇಶದಲ್ಲಿರುವ ದ್ವೀಪಗಳ ಸ್ತೋಮ. ಮಲಯ ದ್ವೀಪಸ್ತೋಮ, ಮಲೇಷಿಯ, ಇಂಡೋನೇಷ್ಯ ಎಂದೂ ಅಡಿಯಲ್ಲಿ ಇದನ್ನು ಕರೆಯುವುದುಂಟು. ಇವುಗಳಲ್ಲಿ ಮೊದಲನೆಯ ಎರಡು ಹೆಸರುಗಳ ಅಡಿಯಲ್ಲಿ ಮಲೆಯ ಪರ್ಯಾಯದ್ವೀಪವನ್ನೂ ಫಿಲಿಪೈನ್ ದ್ವೀಪಗಳನ್ನೂ ಸೇರಿಸಬೇಕಾಗುತ್ತದೆ; ನ್ಯೂ ಗಿನಿಯನ್ನು ಬಿಡಬೇಕಾಗುತ್ತದೆ. ನೆದರ್‍ಲೆಂಡ್ಸ್ ಈಸ್ಟ್ ಇಂಡೀಸ್ ಅಥವಾ ಡಚ್ ಈಸ್ಟ್ ಇಂಡೀಸ್ ಎನಿಸಿಕೊಂಡಿದ್ದ ಭಾಗವನ್ನು ಮಾತ್ರ ಈ ರಾಜ್ಯ ಒಳಗೊಳ್ಳುತ್ತದೆ. ಆದರೆ ಫಿಲಿಪೈನ್ಸ್ ಇದರಲ್ಲಿ ಸೇರತಕ್ಕದ್ದಲ್ಲ. 
ಈ ದ್ವೀಪಸ್ತೋಮಕ್ಕೆ ಈಸ್ಟ್ ಇಂಡೀಸ್ ಅಥವಾ ಪೂರ್ವ ಇಂಡಿಯ ದ್ವೀಪಗಳು ಎಂದು ಹೆಸರಿರುವುದಾದರೂ ಇಲ್ಲಿ ಭಾರತದ ಬುಡಕಟ್ಟಿನ ಜನರಿಲ್ಲ. ಇಲ್ಲಿನ ಜನರ ಸಂಸ್ಕøತಿಯ ಮೇಲೆ ಭಾರತದ ಪ್ರಭಾವ ಬಹಳ ಮಟ್ಟಿಗೆ ಬಿದ್ದಿರುವುದರಿಂದ ಇದಕ್ಕೆ ಈ ಹೆಸರು ಸಾರ್ಥಕ. ಈ ದ್ವೀಪಗಳ ಪೈಕಿ ಜಾವಾದಲ್ಲಿ ಈ ಪ್ರಭಾವ ಅತ್ಯಂತ ಹೆಚ್ಚು. ಗಾತ್ರದಲ್ಲೂ ಆರ್ಥಿಕದೃಷ್ಟಿಯಿಂದಲೂ ಇದು ಈಸ್ಟ್ ಇಂಡೀಸಿನ ಪ್ರಮುಖ ದ್ವೀಪ. ಜನಸಂಖ್ಯೆಯೂ ಹೆಚ್ಚು.

ನ್ಯೂ ಗಿನಿಯ ಜನರದು ಪ್ರತ್ಯೇಕ ಬುಡಕಟ್ಟು. ಇವರ ಸಂಸ್ಕøತಿ ಭಾರತದಿಂದ ಪ್ರಭಾವಿತವಾಗಿಲ್ಲ. ಇವರು ಬಹಳ ಹಿಂದುಳಿದಿದ್ದಾರೆ. ಈ ಪ್ರದೇಶದ ಆಗ್ನೇಯ ದಿಕ್ಕಿನಲ್ಲಿರುವ ಪ್ರದೇಶದ ಜನರನ್ನು, ಆಸ್ಟ್ರೇಲಿಯದ ಆದಿವಾಸಿಗಳನ್ನು, ಇವರು ಹೆಚ್ಚು ಹೋಲುತ್ತಾರೆ.

ಈ ದ್ವೀಪಸ್ತೋಮದ ಬಹುಭಾಗ ಇಂಡೋನೇಷ್ಯಕ್ಕೆ ಸೇರಿದ್ದು. ಆದರೆ ಟಿಮರ್ ದ್ವೀಪದ ಪೂರ್ವಾರ್ಧವೂ ಪಶ್ಚಿಮಾರ್ಧದ ಉತ್ತರದಲ್ಲಿರುವ ಒಂದು ತುಣುಕೂ ಪೋರ್ಚುಗೀಸರ ಅಧೀನದಲ್ಲಿದೆ. ಉತ್ತರ ಹಾಗೂ ಬೋನಿಯೊ ಮತ್ತು ಸರಾವಕ್ ಹಾಗೂ ಬ್ರೂನೈ ಎಂಬ ರಕ್ಷಿತ ರಾಜ್ಯಗಳು ಇವೆ. ನ್ಯೂಗಿನಿಯ ಪೂರ್ವಾರ್ಧ ಆಸ್ಟ್ರೇಲಿಯದ ಅಧೀನದಲ್ಲಿದೆ.

ಈ ದ್ವೀಪಸ್ತೋಮದ ವಿಸ್ತಾರ ಪೂರ್ವ ಪಶ್ಚಿಮವಾಗಿ 3,500 ಮೈಲಿ; ದಕ್ಷಿಣೋತ್ತರವಾಗಿ 1,300 ಮೈಲಿ. ಇಲ್ಲಿ ಚಿಕ್ಕ ದೊಡ್ಡ ಗಾತ್ರಗಳ ಸುಮಾರು 2,000 ದ್ವೀಪಗಳಿವೆ. ಜನಸಂಖ್ಯೆ, ನಾಗರಿಕತೆ, ಸಂಸ್ಕøತಿ, ಆರ್ಥಿಕ ಬೆಳೆವಣಿಗೆ-ಇವು ದ್ವೀಪದಿಂದ ದ್ವೀಪಕ್ಕೆ ವ್ಯತ್ಯಾಸಗೊಳ್ಳುತ್ತವೆ.

ಭೂರಚನೆ: ಈಸ್ಟ್ ಇಂಡೀಸ್ ಭೂರಚನೆ ತುಂಬ ಸ್ವಾರಸ್ಯಕರ. ಏಕೆಂದರೆ ಇಲ್ಲಿ ಭೂಮಿಯ ಹೊರ ಪದರ ಇನ್ನೂ ಬಹಳ ಚಟುವಟಿಕೆಯ ಸ್ಥಿತಿಯಲ್ಲಿದೆ. ಆಲ್ಪ್ಸ್ ಹಿಮಾಲಯ ಶ್ರೇಣಿಯ ಪರ್ವತ ಮಡಿಕೆಯ ಎರಡು ವಕ್ರರೇಖೆಗಳು ಈ ಪ್ರದೇಶದ ಸನಿಹದಲ್ಲಿವೆ. ಆಲ್ಪ್ಸ್ ಮತ್ತು ಹಿಮಾಲಯಗಳಲ್ಲಿ ಪರ್ವತ ರಚನೆಯ ಕಾರ್ಯ ಪೂರೈಸಿದೆ. ಇಲ್ಲಿಯಾದರೋ ಅದಕ್ಕೆ ಇನ್ನೂ ಯುವಾವಸ್ಥೆ. ಬೋರ್ನಿಯೊ, ಮಲೆಯ, ಜಾವಾ, ಸುಮಾತ್ರಗಳ ಈಶಾನ್ಯ ಭಾಗ, ಇವುಗಳ ನಡುವಣ ಕಿರಿ ಆಳದ ಸಮುದ್ರ ಪ್ರದೇಶ-ಇವು ಹೆಚ್ಚು ಕಡಿಮೆ ಸ್ಥಿರವಾಗಿವೆ. ಈಚೆಗೆ ಇಲ್ಲಿ ಭೂಕಂಪವೇನೂ ಇಲ್ಲ. ಆದರೆ ಇದರ ಅಂಚಿನಲ್ಲಿ ಮಾತ್ರ ಆಗಾಗ ಒದರಾಟ ಉಂಟು. ಆಸ್ಟ್ರೇಲಿಯ, ನ್ಯೂ ಗಿನಿಯ ನೈಋತ್ಯಭಾಗ ಹಾಗೂ ಇವುಗಳ ನಡುವಣ ಕಿರಿ ಆಳದ ಕಡಲ ತಳ-ಇವೂ ಪುರಾತನವಾದ ಸ್ಥಿರಭೂಮಿ. ಈ ಎರಡು ಸ್ಥಿರ ಪ್ರದೇಶಗಳ ಸೆರಗಿನ ಉದ್ದಕ್ಕೂ ಬಿಲ್ಲಿನಂತೆ ಒಂದು ದ್ವೀಪವೂ ಆಳ ಕಡಲ ಗ್ರಂಥಿಯೂ ಇವೆ. ಇದೇ ಉತ್ಕರ್ಷಣ ತಾಣ. ಜ್ವಾಲಾಮುಖಿಯ ವ್ಯಾಪಾರಗಳಿಗೂ ಭೂಕಂಪಗಳಿಗೂ ಇದು ಕೇಂದ್ರ. ದ್ವೀಪಗಳು ಪರ್ವತಮಯವಾಗಿ ಎತ್ತರವಾಗಿರುವುದೂ ಇವುಗಳ ನಡುವಣ ಕಡಲು ಆಳವಾಗಿರುವುದೂ ಈ ಅಸ್ಥಿರತೆಗೆ ಕಾರಣ. ಟಿಮರ್‍ನಲ್ಲಿ 4,500 ಎತ್ತರವಿರುವ ಪ್ಲಿಸ್ಟೊಸೀನ್ ಹವಳಬಂಡೆಗಳ ಸಾಲಿದೆ. ಎತ್ತರವಾದ ಪರ್ವತದ ತುದಿಗೂ ಆಳವಾದ ಕಡಲ ತಳಕ್ಕೂ ನಡುವಣ ಇಳಿಜಾರು ಹೆಚ್ಚು ಕಡಿದಾಗಿರುವ ಈ ದ್ವೀಪದ ದಕ್ಷಿಣ ಪಾಶ್ರ್ವದಲ್ಲಿ ಭೂಕಂಪದ ಬಿರುಸು ಜಾಸ್ತಿ.

ಇಲ್ಲಿ 95 ಜೀವಂತ ಜ್ವಾಲಾಮುಖಿಗಳಿವೆ. ಇವುಗಳ ಬಗ್ಗೆ ಸದಾ ಕಣ್ಗಾವಲಿಡಬೇಕಾಗುತ್ತದೆ. ಸುಮಾತ್ರದಿಂದ ಆರಂಭಿಸಿ ಜಾವಾ ಮೂಲಕವಾಗಿ ಸುಂಡ ದ್ವೀಪಗಳವರೆಗೆ ಬಂದರೆ ಉದ್ದಕ್ಕೂ ಕ್ಲುಪ್ತದೂರಗಳಲ್ಲಿ ಅಗ್ನಿಪರ್ವತಗಳಿವೆ. ಇವು ಹಾಲ್ಮಹೇರ. ಸುಲವೇಸಿ ಮುಂತಾದ ದ್ವೀಪಗಳಲ್ಲೂ ಅಲ್ಲಲ್ಲಿ ಇವೆ. ಈ ಅಗ್ನಿ ಪರ್ವತಗಳದು ಸ್ಫೋಟಿಸುವ ಗುಣ. ಲಾವ ಹರಿಯುವುದಿಲ್ಲ. ಆದ್ದರಿಂದ ಇವುಗಳ ಟೋಪಿ ಬೆಳೆಯುವುದು ನಿಧಾನ. ಇವುಗಳಿಂದ ಹೊರಬರುವ ವಸ್ತುವಿನಲ್ಲಿ ಬೂದಿಯೇ ಹೆಚ್ಚು. ಸುಮಾತ್ರ, ಜಾವಾಗಳಲ್ಲಿ ಈ ಬೂದಿಯೂ ಲಾವಾರಸವೂ ಗಾಳಿನೀರುಗಳ ಸಹಾಯದಿಂದ ದೂರ ಸಾಗಿ ಸಮುದ್ರದಲ್ಲಿ ಶೇಖರವಾಗುತ್ತಿವೆ. ಆದ್ದರಿಂದ ಈ ದ್ವೀಪಗಳ ತೀರದಲ್ಲಿ ಜವುಗು ನೆಲ ಬೆಳೆದಿದೆ.

ಈ ದ್ವೀಪಗಳ ಮುಖ್ಯ ಲೋಹ ತವರ. ಸುಮಾತ್ರದ ಪೂರ್ವ ತೀರದ ಬಳಿ ಇರುವ ಬಂಕ, ಬಿಲಿಟನ್, ಸಿಂಕೆಪ್ ದ್ವೀಪಗಳಲ್ಲಿ ಇದು ವಿಶೇಷ. ಪೆಟ್ರೋಲಿಯಂ, ಬಾಕ್ಸೈಟ್, ಚಿನ್ನ, ಕಲ್ಲಿದ್ದಲು-ಇವು ಇತರ ಖನಿಜ. ಕಬ್ಬಿಣ, ತಾಮ್ರ, ನಿಕ್ಕಲ್, ಸೀಸ, ಮ್ಯಾಂಗನೀಸ್, ಮೊನಾಜೈಟ್, ಪ್ಲಾಟಿನಂ, ಟಂಗ್ಸಟನ್, ಆಸ್ಫಾಲ್ಟ್, ಫಾಸ್ಫೇಟ್, ಗಂಧಕ, ಅಯೊಡೀನ್, ವಜ್ರ-ಇವೂ ಅಲ್ಪ ಪ್ರಮಾಣದಲ್ಲಿ ಸಿಗುತ್ತದೆ.

ಮೇಲ್ಮೈಲಕ್ಷಣ : ಈ ದ್ವೀಪಗಳು ಮುಖ್ಯವಾಗಿ ಪರ್ವತಮಯ. ಇಲ್ಲಿ ಉದ್ದನೆಯ ನದಿಗಳು ಇಲ್ಲವೇ ಇಲ್ಲವೆನ್ನಬಹುದು. ಸುಮಾತ್ರದ ಇಂದರಗಿರಿ. ಬೋರ್ನಿಯೊವಿನ ಕಪೋವೀಸ್. ನ್ಯೂ ಗಿನಿಯ ಡಿಗೋಯೆಲ್-ಇವು ಈ ಪೈಕಿ ದೊಡ್ಡ ನದಿಗಳು. ಇವುಗಳ ಉದ್ದ ಕಡಿಮೆಯಾದರೂ ಮಳೆಗಾಲದಲ್ಲಿ ಇವು ಹೆಚ್ಚು ನೀರನ್ನೂ ಹೊತ್ತು ಸಾಗುತ್ತದೆ. ಇವುಗಳ ಬಿರುಸಿನಿಂದಲೂ ಅಗ್ನಿಪರ್ವತಗಳ ಕ್ರಿಯೆಯಿಂದಲೂ ನೆಲದ ನಗ್ನೀಕರಣದ ವೇಗ ಹೆಚ್ಚು. ಇವು ಮುಖಜಭೂಮಿಗಳನ್ನೂ ರಚಿಸಿಕೊಂಡಿವೆ, ಕೆಲವಂತೂ ವರ್ಷಕ್ಕೆ 100 ಗಜದಷ್ಟು ನೆಲ ನಿರ್ಮಾಣ ಮಾಡುತ್ತದೆ.

ವಾಯುಗುಣ: ಬಿಸಿಯಾದ, ಹಬೆ ತುಂಬಿದ, ಭೂಮಧ್ಯರೇಖೆಯ ಪ್ರದೇಶದ ವಾಯುಗುಣ ಇಲ್ಲಿನದು. ಮಾನ್ಸೂನ್ ಪ್ರಭಾವದಿಂದ ಇದು ಅಲ್ಪಸ್ವಲ್ಪ ವ್ಯತ್ಯಾಸಗೊಳ್ಳುತ್ತದೆ. ಬೇಸಗೆಯಲ್ಲಿ-ಜೂನಿನಿಂದ ಸೆಪ್ಟೆಂಬರ್‍ವರೆಗೆ-ಆಗ್ನೇಯ ದಿಕ್ಕಿನಿಂದಲೂ ನವೆಂಬರ್‍ನಿಂದ ಫೆಬ್ರುವರಿವರೆಗೆ ವಾಯುವ್ಯದಿಂದಲೂ ಗಾಳಿ ಬೀಸುತ್ತದೆ. ಎತ್ತರಕ್ಕೆ ಅನುಸಾರವಾಗಿ ಮಳೆಯ ಪ್ರಮಾಣ ವ್ಯತ್ಯಾಸಗೊಳ್ಳುತ್ತದೆ.
ಸಸ್ಯ, ಪ್ರಾಣಿವರ್ಗ: ಈ ದ್ವೀಪಗಳ ಸಸ್ಯ, ಪ್ರಾಣಿವರ್ಗಗಳ ವೈವಿಧ್ಯ ಅಸಾಧಾರಣ. ಒಂದೇ ವಾಯುಗುಣ ಪ್ರದೇಶದಲ್ಲಿರುವ ಈ ಅನೇಕ ದ್ವೀಪಗಳ ಏಕತೆಯಲ್ಲಿ ಅನೇಕ ಕತೆಯಿದೆ. ಜೊತೆಗೆ ಏಷ್ಯ-ಆಸ್ಟ್ರೇಲಿಯಗಳ ಪ್ರಾಣಿ, ಸಸ್ಯವರ್ಗಗಳನ್ನು ಪ್ರತ್ಯೇಕಿಸುವ ನಡುರೇಖೆಯ ಮೇಲೆ ಈ ದ್ವೀಪಗಳು ಹಬ್ಬಿರುವುದೂ ಈ ವೈವಿಧ್ಯ ವೈಭವಕ್ಕೆ ಕಾರಣ. ಬೋರ್ನಿಯೊ ಜಾವಾಗಳಲ್ಲಿ ಇವಕ್ಕೆ ಏಷ್ಯನ್ ಲಕ್ಷಣ; ನ್ಯೂ ಗಿನಿಯಲ್ಲಿ ಆಸ್ಟ್ರೇಲಿಯನ್ ಲಕ್ಷಣ. ಗಿಡಮರಗಳು ಸಾಮಾನ್ಯವಾಗಿ ನಿತ್ಯ ಹರಿದ್ವರ್ಣೀಯ. ಮಳೆ ಕಡಿಮೆಯಾಗಿರುವಲ್ಲಿ ಪರ್ಣಪಾತೀ ಸಸ್ಯಗಳಿವೆ. 

ಅನೇಕ ಜಾತಿಯ ಪ್ರಾಣಿಗಳು ಇಲ್ಲಿವೆಯಾದರೂ ಇವುಗಳಲ್ಲಿ ದೊಡ್ಡವು ವಿರಳ. ಜಾವಾ ಸುಮಾತ್ರ ಬೋರ್ನಿಯೊಗಳ ತೀರಪ್ರದೇಶಗಳಲ್ಲಿರುವ ಆನೆ, ಹುಲಿ, ಖಡ್ಗಮೃಗ. ಒರಾಂಗೋಟಾಂಗುಗಳು ಏಷ್ಯದ ಜಾತಿ. ಪೂರ್ವದ ಕಡೆಗಳಲ್ಲಿ ಆಸ್ಟ್ರೇಲಿಯದ ಕಾಂಗರೂ ಜಾತಿಯ ಪ್ರಾಣಿಗಳಿವೆ. ಹಕ್ಕಿಗಳು ವಿವಿಧ ವರ್ಣಮಯ; ನೋಡಲು ಬಲು ಸುಂದರ. ನ್ಯೂ ಗಿನಿಯ ದಿವ್ಯಪಕ್ಷಿಗೆ (ಬರ್ಡ್ ಆಫ್ ಪ್ಯಾರಡೈಸ್) ಸೌಂದರ್ಯದಲ್ಲಿ ಪ್ರಥಮಸ್ಥಾನ. ಹಲಗಣ್ಣು ಹಕ್ಕಿ (ಆರ್ಗಸ್), ಜೀವಂಜೀವ (ಫೆಸಂಟ್), ಕೊಂಬುಕೊಕ್ಕಿನ ಹಕ್ಕಿ (ಹಾರ್ನ್‍ಬಿಲ್), ಕ್ಯಾಸೊವೆರಿ-ಇವು ಇತರ ಕೆಲವು ಪಕ್ಷಿಗಳು. ಜಾವಾ ಸುಮಾತ್ರ ಬೋರ್ನಿಯೊಗಳಲ್ಲಿ ಹಾವುಗಳು ಸಾಮಾನ್ಯ. ಇಲ್ಲಿನ ಮೊಸಳೆ ಬಹು ಅಪಾಯಕಾರಿ ಪ್ರಾಣಿ. ಕೊಮೊಡೊ ಪೆಡಂಭೂತ ಎಂಬ ಹೆಸರಿನ ಭಾರಿ ಹಲ್ಲಿಗಳು ಕೊಮೊಡೊ ದ್ವೀಪದಲ್ಲಿವೆ. ಸೊಳ್ಳೆ, ಇರುವೆ, ಜೇಡ, ಸಾವಿರ ಕಾಲು ಚೇಳು -ಇವು ಧಾರಾಳವಾಗಿ ಉಂಟು.
ಜನಜೀವನ: ಇಲ್ಲಿನ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಜಾವಾದಲ್ಲೂ ನೆರೆಯ ಮದುರದಲ್ಲೂ ವಾಸಿಸುತ್ತಾರೆ. ಅನೇಕ ದ್ವೀಪಗಳಲ್ಲಿ ನೆಲ ಗಟ್ಟಿಯಿಲ್ಲ. ಬೇಗ ನಗ್ನವಾಗುತ್ತದೆ. ಬೇಸಾಯ ಸ್ಥಿರವಿಲ್ಲ. ಅಗ್ನಿಪರ್ವತಗಳ ಉಗಿತದಿಂದ ಮತ್ತೆ ಮತ್ತೆ ಫಲವತ್ತಾಗುವ ದ್ವೀಪಗಳಲ್ಲಿ ಬೇಸಾಯ ಹೆಚ್ಚು. ಈ ದ್ವೀಪದ ಮೂಲನಿವಾಸಿಗಳಾದ ಕಾಡುಜನರು ಮುಖ್ಯವಾಗಿ ಬೇಟೆಯಿಂದಲೇ ಜೀವಿಸುತ್ತಿದ್ದರು. ಕೆಲವು ದ್ವೀಪಗಳಲ್ಲಿ ಇವರು ಈಗಲೂ ಹಿಂದುಳಿದೇ ಇದ್ದಾರೆ. ಕಾಡು ಸುಟ್ಟು, ನೆಲದ ಮೇಲೆ ಕಾಳು ಚೆಲ್ಲಿ ಬೇಸಾಯ ಮಾಡುವುದೂ ನೆಲದ ಫಲಸಾರ ಕಡಿಮೆಯಾದಾಗ ಆ ಸ್ಥಳ ಬಿಟ್ಟು ಬೇರೆಡೆಗೆ ಹೋಗಿ ಅಲ್ಲೂ ಅದೇ ಕ್ರಮ ಅನುಸರಿಸುವುದೂ ಈ ಹಿಂದುಳಿದ ಜನರ ಬೇಸಾಯ ಪದ್ದತಿ. ದೊಡ್ಡ ದ್ವೀಪಗಳ ಪೂರ್ವಭಾಗಗಳಲ್ಲಿ ವ್ಯವಸ್ಥಿತ ಬೇಸಾಯ ಅನುಸರಿಸಲಾಗುತ್ತದೆ.               
(ನೋಡಿ- ಇಂಡೋನೇಷ್ಯ)

ಈಸ್ಟ್ ಇಂಡೀಸಿನ ಇತಿಹಾಸ: ಈಸ್ಟ್ ಇಂಡೀಸ್ ದ್ವೀಪಸ್ತೋಮದ ಮೂಲನಿವಾಸಿಗಳು ಸ್ಥೂಲವಾದ ಮಂಗೋಲಿಯನ್ ಲಕ್ಷಣವುಳ್ಳವರು. ಆದರೆ ಕ್ರಿಸ್ತಶಕೆಯ ಆರಂಭದಲ್ಲಿ ಇಲ್ಲಿಗೆ ಬಂದು ನೆಲೆಸಿದ ಭಾರತೀಯ ಸಂಸ್ಕøತಿಯ ಪ್ರಭಾವ ಇವರ ಮೇಲೆ ಬಹಳವಾಗಿ ಬಿದ್ದಿದೆ. ಈ ವಲಸೆಗಾರರು ಇಲ್ಲಿಗೆ ತಮ್ಮೊಡನೆ ಹಿಂದೂ ಮತವನ್ನೂ ಹೀನಯಾನ ಮತ್ತು ಮಹಾಯಾನ ಭೌದ್ಧ ಮತವನ್ನೂ ತಂದು ನಾಟಿ ಹಾಕಿದರು. ಜಾವಾದಲ್ಲೂ ಇತರ ಕಡೆಯ ತೀರಪ್ರದೇಶಗಳಲ್ಲೂ ಇವರ ಪ್ರಭಾವ ಹೆಚ್ಚಾಗಿತ್ತು. ಮುಂದೆ ಈ ಪ್ರದೇಶಗಳ ಜನ ಇಸ್ಲಾಂ ಧರ್ಮವನ್ನಪ್ಪಿದರು. ಒಳನಾಡಿನ ಜನ ಮಾತ್ರ ಮೊದಲಿನಿಂದಲೂ ಅನಾಗರಿಕರಾಗಿಯೇ ಉಳಿದರು.

	ಚೀನೀಯರ ಆಗಮನ 19ನೆಯ ಶತಮಾನದಲ್ಲಿ ಅಧಿಕವಾಗಿತ್ತು. ಐರೋಪ್ಯ ರಕ್ತವೂ ಹೆಚ್ಚಾಗಿ ಬೆರೆಯಿತು. 	ಇಪ್ಪತ್ತನೆಯ ಶತಮಾನದಲ್ಲೂ ಈ ಎರಡು ಅಂಶಗಳು ಅಧಿಕವಾಗಿ ಬೆಳೆಯುತ್ತಿವೆ.

ಟಾಲಮಿಯೇ ಮುಂತಾದ ಪ್ರಾಚೀನ ಭೂಗೋಳಶಾಸ್ತ್ರಜ್ಞರಿಗೆ ಈ ಪ್ರದೇಶ ಅಸ್ಪಷ್ಟವಾಗಿ ಗೊತ್ತಿತ್ತು. ಆದರೆ ಇದರ ಪ್ರಾಚೀನ ಚರಿತ್ರೆಗೆ ಆ ಕಾಲದ ಶಾಸನಗಳೂ ಸ್ಮಾರಕಗಳೂ ಚೀನೀ ಲೇಖನಗಳೂ ಮುಖ್ಯ ಆಧಾರ, ಭಾರತೀಯ ವಸತಿಗಳು ಕ್ರಮೇಣ ಸಣ್ಣ ರಾಜ್ಯಗಳಾಗಿ ಮಾರ್ಪಟ್ಟವು. ಶ್ರೀವಿಜಯ (ಪಾಲೆಂಬಾಂಗ್) ಎಂಬಲ್ಲಿ ಸ್ಥಾಪಿತವಾದದ್ದು ಮೊದಲ ಮುಖ್ಯ ರಾಜ್ಯ. ಶೈಲೇಂದ್ರ ವಂಶದ ರಾಜರ ಆಡಳಿತ (700-1300) ಇಡೀ ದ್ವೀಪಸ್ತೋಮದ ಮೇಲೆ ಅಧಿಕಾರ ಹೊಂದಿತ್ತು. ಮುಂದೆ ದಕ್ಷಿಣ ಭಾರತೀಯರ ದಂಡಯಾತ್ರೆಯೂ ಜಾವಾದಲ್ಲಿದ್ದ ರಾಜ್ಯಗಳೂ ಇಸ್ಲಾಂಮ್ ಪ್ರಸಾರವೂ ಇದರ ಹಿರಿಮೆಯನ್ನು ಮುರಿದುವು. ಮಂಗೋಲರ ಪ್ರತಿನಿಧಿಯಾಗಿ ಮಾರ್ಕೊ ಪೋಲೊ ಇಲ್ಲಿಗೆ ಬಂದಿದ್ದಾಗ ಆತ ಇಲ್ಲಿ ಮುಸ್ಲಿಂ ರಾಜ್ಯಭಾರ ಇದ್ದದ್ದನ್ನು ಕಂಡ. 1292ರಲ್ಲಿ ಮಂಗೋಲರು ಜಾವಾದ ಮೇಲೆ ಏರಿಬಂದರು. ಮಂಗೋಲರನ್ನು ಓಡಿಸಿದ ಮೇಲೆ ಜಾವಾದ ಮಜಪಹಿತ್ ಆಳ್ವಿಕೆ ಪ್ರಬಲವಾಗಿ ಹೆಚ್ಚು ಕಡಿಮೆ ಇಡೀ ದ್ವೀಪಸ್ತೋಮದ ಮೇಲೆ ಪ್ರಭುತ್ವಾಧಿಕಾರಗಳಿಸಿಕೊಂಡಿತು. ಪಶ್ಚಿಮ ಜಾವಾದಲ್ಲಿ ಮಾತ್ರ ಸುಂಡ ರಾಜ್ಯದ ಪಾರಮ್ಯ ಉಳಿದುಕೊಂಡಿತ್ತು. 1400ರ ವೇಳೆಗೆ ಮುಸ್ಲೀಮರು ಮಲಕ್ಕವನ್ನು ಗೆದ್ದು ಕರಾವಳಿಯಲ್ಲೇ ಪೂರ್ವಾಭಿಮುಖವಾಗಿ ತೆವಳಿ ಸಾಗಿದರು. ಮುಂದಿನ ನೂರು ವರ್ಷಗಳ ಕೊನೆಯ ವೇಳೆಗೆ ಮಜಪಹಿತ್ ಮತ್ತು ಸುಂಡರಿಗೂ ಸಿಂಹಸ್ವಪ್ನವಾದರು. ಅಷ್ಟರಲ್ಲಿ ಪೋರ್ಚುಗೀಸರು ಬಂದದ್ದರಿಂದ ಇವರ ಮುನ್ನೆಡೆಗೆ ತಡೆಬಿತ್ತು.

 	ಐರೋಪ್ಯರ ಪ್ರಭಾವ: ಪೋರ್ಚುಗೀಸರು 1511ರಲ್ಲಿ ಮಲಕ್ಕವನ್ನು ಹಿಡಿದುಕೊಂಡರು. ಮುಂದೆ ಕೆಲವು ವರ್ಷಗಳಲ್ಲಿ ಸ್ಪೇನಿನವರೂ ಇಲ್ಲಿ ಕಾಲಿಟ್ಟರು. ಇವರೂ ಪೋರ್ಚುಗೀಸರೂ ಸ್ಥಳೀಯ ಗುಂಪುಗಳೆರಡರ ಬೆಂಗಡೆಗೆ ನಿಂತು ಅವುಗಳ ನಡುವೆ ವೈರ ಬೆಳೆಯಲು ಪ್ರೋತ್ಸಾಹ ನೀಡಿದರು. ಮುಸ್ಲಿಮರು ಸುಮಾತ್ರದ ಉತ್ತರ ಭಾಗಕ್ಕೆ ಸರಿದು ಅಲ್ಲಿಂದಲೇ ಸಾಂಬಾರಪದಾರ್ಥ ವ್ಯಾಪಾರ ಮುಂದುವರಿಸಿದರು. ಜಾವಾ, ಬಾಲಿಗಳ ಅತ್ಯಂತ ಪೂರ್ವ ಭಾಗದಲ್ಲಿ ಮಾತ್ರ ಹಿಂದೂಧರ್ಮ ಉಳಿಯಿತು. ಸೇಂಟ್ ಜೇವಿಯರ್ ಮುಂತಾದ ಪಾದ್ರಿಗಳ ಮೂಲಕ ಇಲ್ಲಿನ ಜನರನ್ನು ಕ್ರೈಸ್ತ ಮತಕ್ಕೆ ಪರಿವರ್ತಿಸಿ ಗೆಲ್ಲಬೇಕೆಂದು ಪೋರ್ಚುಗೀಸರು ಪ್ರಯತ್ನಿಸಿದರು. ಆದರೆ ಅಧಿಕಾರಿಗಳ ದೌರ್ಜನ್ಯಗಳಿಂದ ವಿಪರೀತ ಫಲಗಳುಂಟಾದವು. 1570ರಲ್ಲಿ ಟೆನುಟೆಯ ದೊರೆಯ ಕೊಲೆಯಿಂದ ಪೋರ್ಚುಗೀಸರ ವಿರುದ್ಧ ಬಂಡಾಯವೆದ್ದಿತು. ಆಂಬೊಯಿನ ಒಂದು ಬಿಟ್ಟು ಉಳಿದ ಸ್ಥಳಗಳಿಂದ ಅವರು ಕಾಲು ಕೀಳಬೇಕಾಯಿತು. 1580ರ ಸ್ಪೇನ್, ಪೋರ್ಚುಗಲ್ ಒಕ್ಕೂಟವಾದ್ದರಿಂದ ಅವರು ಬದುಕಿದರು; ಅವರಿಗೆ ಸ್ಪೇನಿನ ಪಡೆಯ ನೆರವು ದೊರಕಿತು. 16ನೆಯ ಶತಮಾನದ ಕೊನೆಯ ವೇಳೆಗೆ ಪರಿಸ್ಥಿತಿ ಮತ್ತೆ ಹದಗೆಟ್ಟಿತು. ಈ ದ್ವೀಪಸ್ತೋಮದ ಹತೋಟಿ ಮುಸ್ಲಿಮರ ಕೈಗೆ ಹೋಗುವ ಸಂಭವವುಂಟಾಯಿತು.

 	ಪೋರ್ಚುಗೀಸರು ಹೊರಗಡೆಯ ಇತರ ಸ್ಪರ್ಧಿಗಳನ್ನೂ ಎದುರಿಸಬೇಕಾಯಿತು. ಇಂಗ್ಲಿಷರೂ ಫ್ರೆಂಚರೂ ಇಲ್ಲಿಗೆ ಬಂದರು. ಸಾಂಬಾರ ಪದಾರ್ಥದಲ್ಲಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿಯಬೇಕೆಂಬುದೇ ಇವರ ಉದ್ದೇಶ. ಮೆಣಸಿನ ಪೇಟೆ ಇಂಗ್ಲಿಷರ ಕೈಗೆ ಬಂತು. ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಯ ಸ್ಥಾಪನೆಯಾಯಿತು. ಡಚ್ಚರೂ ಫ್ರೆಂಚರೂ ತಂತಮ್ಮ ಕಂಪನಿಗಳನ್ನು ಕಟ್ಟಿದರು. ಡಚ್ಚರು ಇತರರಿಗಿಂತ ಪ್ರಬಲರಾದರು. ಬಂಡವಾಳ ಹಾಗೂ ಸ್ವಸರಕಾರ ಬಲದಿಂದ ಅವರು ಪೋರ್ಚುಗೀಸರನ್ನು ಆಂಬೊಯಿನದಿಂದ ಓಡಿಸಿದರು: ಅನೇಕ ಕಡೆಗಳಲ್ಲಿ ಕಾರ್ಖಾನೆ ಸ್ಥಾಪಿಸಿದರು. ಡಚ್ಚರ ಮುಂದೆ ಇವರು ನಿಲ್ಲಲಾರದೆ ಹೋದರು. ಆಂಬೊಯಿನದಲ್ಲಿ ಇವರು ಡಚ್ಚರ ಆಶ್ರಯದಲ್ಲೇ ವ್ಯಾಪಾರ ಮಾಡುತ್ತಿದ್ದಾಗ ಜಪಾನೀಯರೊಂದಿಗೆ ಸಂಚು ಹೂಡಿದರೆಂಬ ಕಾರಣದಿಂದ ಅಲ್ಲಿನ ಗೌರ್ನರ್ ಇಂಗ್ಲಿಷ್ ವ್ಯಾಪಾರಿಗಳನ್ನು ವಿಚಾರಣೆಗೆ ಗುರಿಪಡಿಸಿ ಅವರಲ್ಲಿ ಇಬ್ಬರು ವಿನಾ ಉಳಿದವರನ್ನು ಮರಣದಂಡನೆಗೆ ಗುರಿಪಡಿಸಿದರು. ಆಂಬೊಯಿನದಲ್ಲಿನ ಈ ಸಾಲುಕೊಲೆಯಿಂದ ಇಂಗ್ಲಿಷರ ಧೈರ್ಯ ಉಡುಗಿತು. ಸಣ್ಣ ದ್ವೀಪವೊಂದರಲ್ಲಿ ಇವರು ತಲೆಮರಿಸಿಕೊಂಡರು. 1682ರಲ್ಲಿ ಡಚ್ಚರು ಅದನ್ನೂ ಗೆದ್ದಾಗ ಅಲ್ಲಿಂದಲೂ ನಡೆದರು. ಅಲ್ಲಿಗೆ ಇಂಗ್ಲಿಷರೂ ಈ ದ್ವೀಪಸ್ತೋಮದಿಂದ ಸಂಪೂರ್ಣವಾಗಿ ನಿರ್ಗಮಿಸಿದಂತಾಯಿತು.

1708ರಲ್ಲಿ ಡಚ್ ಈಸ್ಟ್ ಇಂಡಿಯ ಕಂಪನಿಯ ಆಡಳಿತ ಕೊನೆಗೊಂಡು ಈಸ್ಟ್ ಇಂಡೀಸ್ ದ್ವೀಪಗಳು ಡಚ್ ಸರ್ಕಾರದ ಸಂಪೂರ್ಣ ಅಧಿಕಾರಕ್ಕೊಳಗಾದುವು. ಡಚ್ಚರು ತಮ್ಮ ದೀರ್ಘ ಆಳ್ವಿಕೆಯ ಕಾಲದಲ್ಲಿ ಅಲ್ಲಿನ ಜನರ ಮೇಲ್ಮೆಗಾಗಿ ಯಾವ ಸುಧಾರಣೆಯನ್ನೂ ಕೈಗೊಳ್ಳಲಿಲ್ಲ. ಡಚ್ ಸರ್ಕಾರದಿಂದ ನೇಮಿಸಲ್ಪಟ್ಟ ಗೌರ್ನರ್ ಜನರಲ್ ಈಸ್ಟ್ ಇಂಡೀಸ್ ದ್ವೀಪಗಳ ಆಡಳಿತದ ಮುಖ್ಯಾಧಿಕಾರಿಯಾಗಿದ್ದ. ಅವನ ಸಹಾಯಕ್ಕೆ ಸಜ್ಜಾದ ಡಚ್ ಸೈನ್ಯವೊಂದಿತ್ತು. ಸರ್ಕಾರದ ಉನ್ನತ ಹುದ್ದೆಗಳೆಲ್ಲ ಡಚ್ಚರಿಗೇ ಮೀಸಲಾಗಿದ್ದುವು. ಕೆಲವು ರಸ್ತೆಗಳನ್ನೂ ಪಾಠಶಾಲೆಗಳನ್ನೂ ಆಸ್ಪತ್ರೆಗಳನ್ನೂ ತೆರೆದಾಗ್ಯೂ ಅವುಗಳ ಉಪಯೋಗ ಆಳುವ ಜನಾಂಗದವರಿಗೆ ಮಾತ್ರ ಸೀಮಿತವಾಗಿತ್ತು. ಒಟ್ಟಿನಲ್ಲಿ ಡಚ್ಚರ ಆಳ್ವಿಕೆ ವಸಾಹತು ನೀತಿಯಿಂದ ಕೂಡಿತ್ತು. ಈ ದ್ವೀಪಗಳ ಹೇರಳವಾದ ಖನಿಜ ಸಂಪತ್ತನ್ನೂ ವ್ಯವಸಾಯೋತ್ಪನ್ನಗಳನ್ನೂ ಡಚ್ಚರು ಶೋಷಿಸಿದರು. ಈಸ್ಟ್ ಇಂಡೀಸ್ ದ್ವೀಪಗಳ ನಿವಾಸಿಗಳು ರಾಜಕೀಯ ಮತ್ತು ಆರ್ಥಿಕ ಸಂಕಷ್ಟಗಳನ್ನನುಭವಿಸಬೇಕಾಗಿ ಬಂತು. 19ನೆಯ ಶತಮಾನದಲ್ಲಿ ಈಸ್ಟ್ ಇಂಡೀಸ್ ದ್ವೀಪಗಳಲ್ಲಿ ಡಚ್ಚರ ವಸಾಹುತುಶಾಹಿ ಮತ್ತು ಸಾಮ್ರಾಜ್ಯಶಾಹಿ ನೀತಿ ಪರಮಾವಧಿಯನ್ನೂ ಅಲ್ಲಿನ ನಿವಾಸಿಗಳ ಜೀವನ ಅಧೋಗತಿಯನ್ನೂ ಮುಟ್ಟಿದುವು.
ಇಪ್ಪತ್ತನೆಯ ಶತಮಾನದಲ್ಲಿ ಜನರಲ್ಲಿ ಜಾಗೃತಿ ಉಂಟಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಸಾಗಿತು. ಡಚ್ ಈಸ್ಟ್ ಇಂಡೀಸ್ ಪ್ರದೇಶದಲ್ಲಿ ಸ್ವತಂತ್ರ ಇಂಡೊನೇಷ್ಯದ ಉದಯಮಾಯಿತು. (ನೋಡಿ- ಇಂಡೋನೇಷ್ಯದ-ಚರಿತ್ರೆ)
                        (ಜಿ.ಆರ್.ಆರ್.) 

 	ಈಸ್ಟ್ ಇಂಡೀಸಿನ ಭೂ ಇತಿಹಾಸ: ಈಸ್ಟ್ ಇಂಡೀಸಿನ ಮುಖ್ಯ ಭಾಗಗಳಲ್ಲಿ ಭೂಮಿಯ ಹೊರಪದರ ಇನ್ನೂ ಜಾಗೃತಸ್ಥಿತಿಯಲ್ಲಿರುವುದರಿಂದ ಭೂವಿಜ್ಞಾನ ದೃಷ್ಟಿಯಲ್ಲಿ ಇದು ಒಂದು ಮುಖ್ಯ ಪ್ರದೇಶವಾಗಿದೆ. ಈ ಪ್ರದೇಶ ಆಲ್ಪೈನ್-ಹಿಮಾಲಯ ಪರ್ವತ ಮಡಿಕೆಗಳ ವಲಯಗಳು ಸಂಧಿಸಿ ಮುಂದುವರಿಯುವ ಸ್ಥಳದಲ್ಲಿದೆ. ಆಲ್ಪ್ಸ್ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಪರ್ವತ ಉಗಮ ಕಾರ್ಯ ಮುಗಿದಿದೆ; ಆದರೆ ಈಸ್ಟ್ ಇಂಡೀಸ್ ಭಾಗದಲ್ಲಿ ಈ ಕಾರ್ಯಾಚರಣೆ ಇನ್ನೂ ಯೌವನಾವಸ್ಥೆಯಲ್ಲಿದೆ. ಬೋರ್ನಿಯೊ, ಮಲೆಯ ಮತ್ತು ಜಾವಾ ಸುಮಾತ್ರಗಳ ಹೊರ ಅಂಚುಗಳನ್ನು ಹೊರತು ಈಶಾನ್ಯ ಭಾಗಗಳು ಹಾಗೂ ಈಗ ಆವರಿಸಲ್ಪಟ್ಟಿರುವ ಆಳವಲ್ಲದ ಸಮುದ್ರದ ನಿಕ್ಷೇಪ ಭಾಗಗಳು ಚಿರಭೂಪ್ರದೇಶಗಳಾಗಿದ್ದು ಈ ಭಾಗಗಳಲ್ಲಿ ಅಗ್ನಿಪರ್ವತ ಕಾರ್ಯಾಚರಣೆಗಳ ಕುರುಹಿಲ್ಲ. ಭೂಕಂಪಗಳೂ ಇಲ್ಲ. ಆಸ್ಟ್ರೇಲಿಯ, ನ್ಯೂ ಗಿನಿಯ ನೈಋತ್ಯ ಹೊರವಲಯಗಳು ಮತ್ತು ಇವುಗಳ ಮಧ್ಯದ ಆಳವಿಲ್ಲದ ಸಮುದ್ರ ಭಾಗಗಳು ಪುರಾತನ ಸ್ಥಿರ ಭೂಭಾಗಗಳಾಗಿವೆ. ಈ ಎರಡೂ ಭೂಭಾಗಗಳ ಅಂಚುಗಳು ಹಾಗೂ ಅವು ಪರಸ್ಪರ ಕಮಾನಿನಾಕಾರದ ದ್ವೀಪ ಮತ್ತು ಆಳವಾದ ಸಮುದ್ರದ ಜಟಿಲ ಭಾಗ ಮೇಲೆತ್ತಲ್ಪಟ್ಟ ಪ್ರದೇಶ. ಈ ಭಾಗ ತೀವ್ರವಾದ ಅಗ್ನಿಪರ್ವತಗಳ ಮತ್ತು ಭೂಕಂಪನಗಳ ಕಾರ್ಯಾಚರಣೆಗೆ ಒಳಪಟ್ಟಿರುತ್ತದೆ. ಗುರುತ್ವಾಕರ್ಷಣೆ ಅಳತೆಗಳಿಂದ ಈ ಪ್ರದೇಶ ಬಲು ಅಸ್ಥಿರವೆಂದು ತಿಳಿದುಬಂದಿದೆ. ದ್ವೀಪಗಳ ಹೊರವಲಯದಲ್ಲಿ--ಸುಮಾತ್ರದ ನೈಋತ್ಯ ಭಾಗ ಪಶ್ಚಿಮ ಜಾವಾ ಮತ್ತು ಕೆಳಸುಂಡಾ ದ್ವೀಪಗಳನ್ನೊಳಗೊಂಡ ಪ್ರದೇಶ ಒಂದು ಕಡೆಯೂ ಮತ್ತೊಂದು ಕಡೆ ಫಿಲಿಪೈನ್ಸ್, ನ್ಯೂ ಗಿನಿಯ ಈಶಾನ್ಯ ಭಾಗವೂ ಇದ್ದು ಇದು ಬಹುಶಃ ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಚಲಿಸುತ್ತಿರುವ ಎರಡು ಪ್ರಧಾನ ಭೂಭಾಗಗಳೆಂದು ಪರಿಗಣಿತವಾಗಿದೆ. ಸೆಲೆಬೆಸ್ (ಸುಲವೇಸಿ) ಮತ್ತು ಹಲ್ಮಹೇರದ ಅತಿ ಡೊಂಕಾದ ಆಕಾರ ಎರಡು ಸ್ಥಿರ ಭೂಭಾಗಗಳ ನಡುವೆ ಮೇಲೆತ್ತಲ್ಪಟ್ಟಿರುವ ಎರಡು ಪ್ರಧಾನ ಮಡಿಕೆಗಳು ಸೇರುವ ಕಡೆ ಇರುವುದರಿಂದ ರಚನೆ ಕ್ಲಿಷ್ಟವಾಗಿದೆ. ಹೀಗಾಗಿ ಈ ದ್ವೀಪಗಳ ಮಧ್ಯಭಾಗದಲ್ಲಿ ಕಡಿದಾದ ಪರ್ವತಗಳೂ ಆಳವಾದ ಸಮುದ್ರಗಳೂ ಇವೆ. ಇಲ್ಲಿ ನಡೆದ ಭೂಕಾರ್ಯಗಳ ತೀವ್ರಗತಿಗೆ ಸಾಕ್ಷಿಯಾಗಿ ಟೈಮರಿನಲ್ಲಿರುವ ಪ್ಲಿಸ್ಟೊಸೀನ್ ಕಲ್ಪದ (1 ದಶಲಕ್ಷವರ್ಷ ಪ್ರಾಚೀನದವರೆಗಿನ ಅವಧಿ) ಹವಳ ದಿಬ್ಬಗಳು ಸಮುದ್ರ ಮಟ್ಟದಿಂದ 4,500 ಎತ್ತರಕ್ಕೆ ಒಯ್ಯಲ್ಪಟ್ಟಿವೆ. ಅಲ್ಲದೆ ದ್ವೀಪದ ದಕ್ಷಿಣ ಭಾಗದಲ್ಲಿ ಎತ್ತರದ ಪರ್ವತಗಳಿಂದ ಆಳವಾದ ಸಮುದ್ರದತ್ತ ಇರುವ ತೀವ್ರಗತಿಯ ಇಳಿಜಾರು ಪ್ರದೇಶದಲ್ಲಿ ಅಸಂಖ್ಯಾತ ಭೂಕಂಪಗಳು ತಲೆದೋರುತ್ತಿರುತ್ತವೆ.

ಈ ಪ್ರದೇಶದ ನ್ಯೂ ಗಿನಿಯಲ್ಲಿ ಅತಿಪುರಾತನ ಶಿಲೆಗಳೆಂದರೆ ಡಿವೋನಿಯನ್ ಕಲ್ಪದವು. (350-400 ದ.ಲ. ವರ್ಷ ಪ್ರಾಚೀನ ಕಾಲ). ಕಾರ್ಬೊನಿಫೆರಸ್ ಮತ್ತು ಪರ್ಮಿಯನ್ ಕಲ್ಪದ (225-350 ದ.ಲ.ವರ್ಷ ಪ್ರಾಚೀನ ಕಾಲ)ಶಿಲೆಗಳೂ ಸಾಕಷ್ಟು ವಿಸ್ತಾರವಾಗಿ ಹರಡಿದ್ದು ಈಗ ಅಲ್ಲಲ್ಲೆ ಚದುರಿಹೋದಂತೆ ಕಾಣುತ್ತಿವೆ. ಇವುಗಳ ಮೇಲ್ಭಾಗದಲ್ಲಿ ಇತರ ಭೂಕಲ್ಪಗಳ ಶಿಲೆಗಳು ನಿಕ್ಷೇಪಗೊಂಡಿದೆ. ಅವುಗಳಲ್ಲಿ ತೃತೀಯ ಜೀವಿಕಲ್ಪದ ಮತ್ತು ಪ್ಲಿಸ್ಟೊಸೀನ್ ಕಲ್ಪದ ಹೆಚ್ಚು ನಿಕ್ಷೇಪಗಳು ಪ್ರದೇಶವನ್ನು ಆವರಿಸಿವೆ. 

ಟೈಮರ್ ಎಂಬಲ್ಲಿ ಮೇಲಣ ಕ್ರಿಟೇಷಿಯಸ್ ಕಲ್ಪದ (65-135 ದ.ಲ.ವರ್ಷ ಪ್ರಾಚೀನ ಕಾಲ) ಶಿಲೆಗಳಿವೆ. ಇವು ಸಮುದ್ರದ ಆಳವಾದ ಭಾಗಗಳಲ್ಲಿ ಶೇಖರವಾಗುವ ಕೆಂಪು ಸುದ್ದೆ ಮಣ್ಣಿನಿಂದ ಕೂಡಿದ್ದು ಮ್ಯಾಂಗನೀಸ್ ಉಂಡೆಗಳು, ಷಾರ್ಕ್ ಮೀನಿನ ಹಲ್ಲುಗಳು ಮತ್ತು ರೇಡಿಯೋಲೇರಿಯ ಮುಂತಾದ ಜೀವಾವಶೇಷಗಳನ್ನೊಳಗೊಂಡಿವೆ.
ಡಿವೋನಿಯನ್ ಕಲ್ಪದಿಂದ (350-400 ದ.ಲ. ವರ್ಷ ಪ್ರಾಚೀನ ಕಾಲ) ಇತ್ತೀಚಿನ ಕಾಲದವರೆಗಿನ ಅಂತಸ್ಸರಣ ಶಿಲೆಗಳು ಮತ್ತು ಜ್ವಾಲಾಮಖಜ ಶಿಲೆಗಳು ಇಡೀ ದ್ವೀಪಸ್ತೋಮವನ್ನೆಲ್ಲ ಆವರಿಸಿವೆ. ಇವುಗಳಲ್ಲಿ ಸ್ಥೂಲವಾದ ಗ್ರಾನೈಟ್ ಶಿಲೆಯಿಂದ ಪುಡಿಯಾದ ಜ್ವಾಲಾಮುಖಜ ಬೂದಿಯವರೆಗೂ ಎಲ್ಲ ಬಗೆಯ ಶಿಲೆಗಳಿವೆ. ಪ್ರಾಚೀನ ಜೀವಿಯುಗದ ರೂಪಾಂತರ ಪದರು ಶಿಲೆಗಳು ಮುಖ್ಯವಾಗಿ ಸುಮಾತ್ರ, ಬೋರ್ನಿಯೊ, ಸೆಲೆಬೆಸ್, ಟೈಮರ್-ಸೆರಾಮ್ ದ್ವೀಪಸ್ತೋಮ, ಹಲ್ಮಹೆರ, ನ್ಯೂಗಿನಿಗಳಲ್ಲಿವೆ. 
ಈಸ್ಟ್ ಇಂಡೀಸಿನಲ್ಲಿ ಸದಾ ಗಮನಿಸುತ್ತಿರಬೇಕಾದ 95 ಜಾಗೃತ ಜ್ವಾಲಾಮುಖಿಗಳಿವೆ. ಇವುಗಳ ಜಾಡು ಮುಖ್ಯವಾಗಿ ಉತ್ತರ ಸುಮಾತ್ರದಿಂದ ಜಾವಾ ಕೆಳಸುಂಡಾ ದ್ವೀಪಗಳನ್ನು ಹಾದು ಬಂಡಾ ದ್ವೀಪಸ್ತೋಮದವರೆಗೂ ಹಬ್ಬಿದೆ. ಈ ಜಾಡಿನಲ್ಲಿ ಜ್ವಾಲಾಮುಖಿಗಳು ಸಮದೂರದಲ್ಲಿ ಒಂದಾದಮೇಲೊಂದು ಕಂಡುಬರುತ್ತವೆ. ಆದರೆ ಹಲ್ಮಹೆರ ಮತ್ತು ಅಕ್ಕಪಕ್ಕದ ದ್ವೀಪಗಳಲ್ಲಿ ಈ ಬಗೆಯ ಹರಡುವಿಕೆ ಇಲ್ಲ. ಮತ್ತೊಂದು ಸಾಲು ಉತ್ತರ ಸೆಲೆಬೆಸಿನಿಂದ ಸಾಂಘಿಹೆ ದ್ವೀಪಗಳ ಮೇಲೆ ಹಾದು ಮಿಂಡನೋವ ವರೆಗೆ ಹಬ್ಬಿದೆ. ಈ ಜ್ವಾಲಾಮುಖಿಗಳ ಕಾರ್ಯಾಚರಣೆ ಸ್ಫೋಟಕ ರೀತಿಯದಾಗಿದ್ದು ಅಲ್ಪಸ್ವಲ್ಪ ಶಿಲಾರಸ ಹೊರಹೊಮ್ಮುತ್ತದೆ. ಇದರಲ್ಲಿನ ಮುಖ್ಯ ಕ್ರಿಯೆ ಎಂದರೆ ನಿಧಾನವಾಗಿ ತಲೆದೋರುವ ಜಿಗುಟು ಶಿಲಾರಸದ ಗುಮ್ಮಟಾಕಾರಗಳು. ಜಾವಾ ಮತ್ತು ಸುಮಾತ್ರಗಳ ಭೂಸಂಧಿಯಲ್ಲಿರುವ ಕ್ರಾಕಟೋವ (ನೋಡಿ- ಕ್ರಾಕಟೋವ) ಎಂಬ ಜ್ವಾಲಾಮುಖಿಯ 1893ರ ಸ್ಫೋಟನೆ ಅತಿ ಭಯಂಕರವಾದುದು. ಈ ಸ್ಫೋಟನೆಯಲ್ಲಿ 30,000 ಪ್ರಾಣಹಾನಿಯಾಯಿತು ಮತ್ತು ಸಮುದ್ರ ತಳದಲ್ಲಿ ಕಾಲ್‍ಡೆರಾ (ಜ್ವಾಲಾಮುಖಿ ಕಮರಿ) ಏರ್ಪಟ್ಟಿತು. ಇತ್ತೀಚೆಗೆ ಆದ ಸ್ಫೋಟನೆಯಿಂದ ಅನಕ್ ಕ್ರಾಕಟೋವ ದ್ವೀಪದಲ್ಲಿ ಒಂದು ಹೊಸ ಬೆಟ್ಟವೇ ಉಂಟಾಯಿತು. ಈ ಸ್ಫೋಟನೆಯಿಂದ ಬಂದ ಉರಿಯುವ ಬಿಸಿ ಬೂದಿ ಮಧ್ಯ ಜಾವಾದಲ್ಲಿರುವ ಮೆರಾಪಿ ಜ್ವಾಲಾಮುಖಿಯ ಮೇಲೆ ಶೇಖರವಾಗಿದೆ. 

ಜ್ವಾಲಾಮುಖಿಗಳಿಂದ ಹೊರಬಂದ ವಸ್ತುಗಳಲ್ಲಿ ಬೂದಿಯೇ ಅಧಿಕ. ಜಾವಾ ಜ್ವಾಲಾಮುಖಿಗಳ ಬೂದಿ ಹೆಚ್ಚು ಕ್ಷಾರಯುಕ್ತ. ಸುಮಾತ್ರದವು ಹೆಚ್ಚು ಆಮ್ಲಯುಕ್ತ. ಈ ದ್ವೀಪಗಳ ಅನೇಕ ಭಾಗಗಳಲ್ಲಿ ಸಸ್ಯವರ್ಗ ಮತ್ತು ಜನಜೀವನದ ಮೇಲೆ ಇವುಗಳ ಪ್ರಭಾವ ಸಾಕಷ್ಟಿದೆ. ಸುಮಾತ್ರ ಮತ್ತು ಜಾವಾಗಳಲ್ಲಿ ವಿಸ್ತಾರವಾದ ಪುರಾತನ ಶಿಲೆಗಳ ಮೇಲೆ ಜ್ವಾಲಾಮುಖಿಗಳ ಬೂದಿ ಮತ್ತು ಶಿಲಾರಸ ಹೇರಳವಾದ ಮಳೆಯೊಂದಿಗೆ ಸೇರಿ ಸುರಿದಾಗ ಹೊಸ ಶಿಲೆಗಳು ರೂಪುಗೊಂಡಿವೆ. ಅನೇಕ ಜ್ವಾಲಾಮುಖಿಗಳಿಂದ ಶಿಲಾಕಣಗಳು ಗಾಳಿ ಮತ್ತು ನೀರಿನಿಂದ ಸಾಗಿಸಲ್ಪಟ್ಟು ಪುರಾತನ ಶಿಲಾಸಮುದಾಯಗಳ ಮೇಲೆ ಹರಡಿವೆ. ಇದರೊಂದಿಗೆ ಸುಮಾತ್ರದ ಪಶ್ಚಿಮ ತೀರದ ಪರ್ವತಸಾಲುಗಳಿಂದ ಸಾಗಿಸಲ್ಪಟ್ಟ, ಮೆಕ್ಕಲುಮಣ್ಣು ಪೂರ್ವಭಾಗದ ಕಡಿಮೆ ಆಳದ ಸಮುದ್ರಭಾಗಗಳಲ್ಲಿ ಸಂಚಯನಗೊಂಡಿದೆ. ಇದರಿಂದಾಗಿ ವಿಶಾಲ ಸ್ಥಳಗಳಲ್ಲಿ ಜೌಗು ಮತ್ತು ತಗ್ಗು ಪ್ರದೇಶಗಳುಂಟಾಗಿವೆ. ಈ ದ್ವೀಪದ 1/3 ಭಾಗ ಇಂಥ ಪ್ರದೇಶ. ಇದೇ ರೀತಿಯ ಕಾರ್ಯ ಸಣ್ಣ ಪ್ರಮಾಣದಲ್ಲಿ ಜಾವಾದ ಉತ್ತರ ತೀರಪ್ರದೇಶದ ಮತ್ತಿತರ ಕಡೆಗಳಲ್ಲೂ ಕಾಣಬರುತ್ತದೆ.

ಈ ದ್ವೀಪಗಳ ಅತಿ ಮುಖ್ಯವಾದ ಅದುರು ತವರ. ಇದು ಹೆಚ್ಚಾಗಿ ಸುಮಾತ್ರದ ಪೂರ್ವತೀರದಾಚೆಗಿರುವ ಬಾಂಗ್‍ಕ. ಬಿಲ್ಲಿಟನ್ ಮತ್ತು ಸಿಂಗ್ ಕೆಪ್ ದ್ವೀಪಗಳಲ್ಲಿ ದೊರೆಯುತ್ತದೆ. ಖನಿಜ ಜಾಡು ಮಲಯ ಪರ್ಯಾಯದ್ವೀಪದ ಪರ್ವತ ಸಾಲಿನ ವಿಸ್ತರಣೆ. ಈ ದ್ವೀಪಗಳ ಇತರ ಖನಿಜಗಳು ಪೆಟ್ರೋಲಿಯಂ, ಬಾಕ್ಸೈಟ್ (ಅಲ್ಯುಮಿನಂ ಅದುರು), ಚಿನ್ನ, ಬೆಳ್ಳಿ ಮತ್ತು ಕಲ್ಲಿದ್ದಲು. ಬೋರ್ನಿಯೊದ ವಾಯುವ್ಯ ಮತ್ತು ಪೂರ್ವತೀರ ಭಾಗಗಳಲ್ಲಿನ ಮೇಲಣ ತೃತೀಯ ಜೀವಿಯುಗದ ಶಿಲೆಗಳ ಮೇಲ್ಮಡಿಕೆಗಳಲ್ಲಿ ಪೆಟ್ರೋಲಿಯಂ ಶೇಖರವಾಗಿದೆ. ಕಬ್ಬಿಣ, ತಾಮ್ರ, ನಿಕ್ಕಲ್, ಸೀಸ, ಮ್ಯಾಂಗನೀಸ್, ಮೊನಜೈಟ್, ಪ್ಲಾಟಿನಂ, ಟಂಗ್‍ಸ್ಟನ್, ಆಸ್ಫಾಲ್ಟ್, ಫಾಸ್ ಫೇಟ್, ಗಂಧಕ, ಅಯೊಡಿನ್ ಮತ್ತು ವಜ್ರಗಳೇ ಮುಂತಾದ ಖನಿಜಗಳ ಗಣಿಕೆಲಸ ಅಲ್ಪಸ್ವಲ್ಪ ಪ್ರಮಾಣದಲ್ಲಿ ನಡೆಯುತ್ತಿದೆ.

	(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ